ಶ್ರೀ ಕ್ಷೇತ್ರ ಸುತ್ತೂರು ಮಠ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕ್ ಶ್ರೀಕ್ಷೇತ್ರ ಸುತ್ತೂರಿನಲ್ಲಿರುವ ಶ್ರೀಮಠವು “ಸುತ್ತೂರು ಮಠ” ಎಂದೇ ಜನಪ್ರಿಯವಾದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ತನ್ನ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಆದರ್ಶಗಳ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಉತ್ತೇಜಿಸುವ ಒಂದು ಅದ್ಭುತ ಆಂದೋಲನವಾಗಿ ರೂಪುಗೊಂಡಿದೆ.

ಶ್ರೀಮಠದ ಕಾರ್ಯಚಟುವಟಿಕೆಗಳ ಪ್ರಭಾವವು ಸಣ್ಣ ಐತಿಹಾಸಿಕ ಗ್ರಾಮವಾದ ಸುತ್ತೂರನ್ನು ಮೀರಿ, ಕರ್ನಾಟಕದ ಗಡಿಯ ಒಳಗೆ - ಹೊರಗೆ ಹಾಗೂ ಇತರ ದೇಶಗಳವರೆಗೂ ಪಸರಿಸಿದೆ. ಶ್ರೀಮಠದ ಗುರುಪರಂಪರೆಯತ್ತ ಒಮ್ಮೆ ಗಮನಹರಿಸಿದಲ್ಲಿ ಅದು ತನ್ನ ಎಲ್ಲ ಮಠಾಧೀಶರ ಅಚಲವಾದ ಸಾಮಾಜಿಕ ಕಳಕಳಿಯ ಮೇಲೆ ಬೆಳಕು ಚೆಲ್ಲುತ್ತದೆ. ಕ್ರಿ.ಶ. ೧೦ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಅಸ್ತಿತ್ವವನ್ನು ಸಾರುವ ಶಾಸನಗಳ ಪುರಾವೆಗಳು ಕಾಣಸಿಗುತ್ತವೆ. ಶತಶತಮಾನಗಳಿಂದ ನಡೆದುಕೊಂಡು ಬಂದ ಈ ಮಹೋನ್ನತ ಪರಂಪರೆಯ ಸಂಸ್ಥಾಪಕರು ಸುತ್ತೂರು ಶ್ರೀಮಠದ ಪರಮಪೂಜ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು ಎಂಬುದನ್ನು ಆ ಶಾಸನ ಪುರಾವೆಗಳು ದೃಢಪಡಿಸುತ್ತವೆ.


ಶ್ರೀಮಠದ ಸಂಸ್ಥಾಪಕರಾದ ಪೂಜ್ಯ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು, ಆ ಕಾಲದಲ್ಲೇ, ಎರಡು ರಾಜ್ಯಗಳ ನಡುವೆ ಇದ್ದ ಸಂಘರ್ಷವನ್ನು ಬಗೆಹರಿಸುವ ಮೂಲಕ ಯಶಸ್ವಿಯಾಗಿ ಸಾಮರಸ್ಯ ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿ ಕಾರಣೀಭೂತರಾಗಿದ್ದಾರೆ. ಆ ಮೂಲಕ ಮುಂದಿನ ಪೀಳಿಗೆಯ ಮಠಾಧೀಶರಿಗೆ ಸಮಾಜದ ಒಟ್ಟಾರೆ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುವ ಗುರುತರವಾದ ಜವಾಬ್ದಾರಿಯನ್ನು ನೀಡಿ ಹೋಗಿದ್ದಾರೆ.

ದೂರದೃಷ್ಟಿ ಹೊಂದಿದ್ದ ಮಠಾಧೀಶರುಗಳ ನಿಸ್ವಾರ್ಥ ಮತ್ತು ಅವಿರತ ಪ್ರಯತ್ನಗಳಿಂದಾಗಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಇತಿಹಾಸದುದ್ದಕ್ಕೂ, ತಮ್ಮ ಸ್ಥೈರ್ಯ ಹಾಗೂ ಜಗತ್ತನ್ನು ಬದಲಿಸುವತ್ತ ನೀಡಿದ ಕೊಡುಗೆಗಳ ಕಾರಣಕ್ಕಾಗಿ ಮಠದ ಅನೇಕ ಮಠಾಧೀಶರ ಹೆಸರುಗಳು ಎಂದೆಂದಿಗೂ ಚಿರಸ್ಮರಣೀಯವಾಗಿ ಉಳಿದಿದೆ. ಶ್ರೀಮಠದ ಎಲ್ಲಾ ಪೂಜ್ಯರು ಜಗತ್ತಿನಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಸಮಾಜದ ಮೇಲೆ ಅವರ ಸಕಾರಾತ್ಮಕ ಪ್ರಭಾವದಿಂದಾಗಿ ಅವರೆಲ್ಲರೂ ಚಿರಸ್ಮರಣೀಯರಾಗಿ ಉಳಿದಿದ್ದಾರೆ.

ಶ್ರೀಮಠದ ೨೩ನೇ ಗುರುಗಳವರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಪ್ರಭಾವ ಈ ನಾಡಿನ ಜನರ ಮೇಲೆ ಎಷ್ಟರಮಟ್ಟಿಗೆ ಇದೆಯೆಂದರೆ, ಅವರು ಈ ಜಗತ್ತನ್ನು ಸೌಹಾರ್ದಯುತ ಜೀವನಕ್ಕೆ ಯೋಗ್ಯವನ್ನಾಗಿಸಿದ ಅತ್ಯಂತ ಸ್ಪೂರ್ತಿದಾಯಕ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದಾರೆ ಎಂದರೇ ತಪ್ಪಾಗಲಾರದು.





ಜೆಎಸ್‌ಎಸ್ ಮಹಾವಿದ್ಯಾಪೀಠ - ಉತ್ತಮ ಸಮಾಜದ ನಿರ್ಮಾಣದತ್ತ

ಶ್ರೀಮನ್ಮಹಾರಾಜ ರಾಜಗುರುತಿಲಕ ಪರಮಪೂಜ್ಯಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು

ಜೆಎಸ್‌ಎಸ್ ಮಹಾವಿದ್ಯಾಪೀಠ

ಮೈಸೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬರುವ ವಿದ್ಯಾರ್ಥಿಗಳ ವಸತಿ ಅಗತ್ಯತೆಗಳನ್ನು ಪೂರೈಸಲು ೧೯೨೮ರಲ್ಲಿ ಚಿಕ್ಕದಾದ ವಿದ್ಯಾರ್ಥಿ ವಸತಿನಿಲಯವೊಂದನ್ನು ಸ್ಥಾಪಿಸುವ ಮೂಲಕ ಜೆಎಸ್‌ಎಸ್ ಮಹಾವಿದ್ಯಾಪೀಠ ತೆರೆಯಲು ನಾಂದಿಯಾಯಿತು. ಸುತ್ತೂರು ಶ್ರೀಮಠದ ೨೩ನೇ ಮಠಾಧೀಶರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ೧೯೫೪ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠವನ್ನು ಸಂಸ್ಥಾಪಿಸಿದರು. ನಾನಾ ಅಭಿವೃದ್ಧಿಗಳ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ನಿರ್ಧಿಷ್ಟವಾದ, ವಿಶಾಲವಾದ ದೃಷ್ಟಿಕೋನವನ್ನು ಹೊಂದಿರುವ ಜೆಎಸ್‌ಎಸ್ ಮಹಾವಿದ್ಯಾಪೀಠವು ಕಾಲದಿಂದ ಕಾಲಕ್ಕೆ ಸಶಕ್ತವಾಗಿ ಬೆಳೆಯುತ್ತಲೇ ಹೋಯಿತು. ಸುಧೀರ್ಘ ಮತ್ತು ಆರೋಗ್ಯಕರ ಜೀವನ, ಎಲ್ಲರಿಗೂ ಶಿಕ್ಷಣ ಮತ್ತು ಯೋಗ್ಯವಾದ ಜೀವನಮಟ್ಟ-ಇವೇ ಮಾನವಾಭಿವೃದ್ಧಿಯ ಗುಣಸೂಚಕಗಳು ಎಂಬುದು ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಶತಶತಮಾನಗಳಿಂದ ನಂಬಿಕೊಂಡು ಬಂದ ಸಿದ್ಧಾಂತ. ಜೆಎಸ್‍ಎಸ್ ಮಹಾವಿದ್ಯಾಪೀಠವು ಇಂದು ಇದೇ ಸಿದ್ಧಾಂತದ ಆಧಾರದ ಮೇಲೆ ತಲೆ ಎತ್ತಿ ನಿಂತಿದೆ.



ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಅವಿರತ ಪ್ರಯತ್ನಗಳ ಫಲವಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಶಿಕ್ಷಣ ಕ್ಷೇತ್ರದಲ್ಲಿ ಅಘಾದ ಬೆಳವಣಿಗೆಯನ್ನು ಕಂಡಿದೆ. ಶಿಶುವಿಹಾರದಿಂದ ಸ್ನಾತಕೋತ್ತರ ಸಂಸ್ಥೆಗಳು ಹಾಗೂ ಸ್ನಾತಕೋತ್ತರ ಸಂಶೋಧನಾ ಕೇಂದ್ರಗಳವರೆಗೆ ೩೦೦ಕ್ಕೂ ಅಧಿಕ ಸಂಸ್ಥೆಗಳನ್ನು ಹೊಂದಿದ್ದು, ೧,೦೦,೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಈ ಸಂಸ್ಥೆಗಳು ಪೂರೈಸುತ್ತಿವೆ.

ಜೆಎಸ್‌ಎಸ್ ಮಹಾವಿದ್ಯಾಪೀಠದ ಶೈಕ್ಷಣಿಕ ಕೊಡುಗೆಗಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶಿಶುವಿಹಾರದಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನೀಡುವ ಶಾಲೆಗಳು, ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು, ತಾಂತ್ರಿಕ, ವೈದ್ಯಕೀಯ ವಿದ್ಯಾಸಂಸ್ಥೆಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ವಿಸ್ತರಿಸಿದೆ. ಈ ಧ್ಯೇಯವನ್ನು ಕಾರ್ಯಗತಗೊಳಿಸಲು ಸಂಸ್ಥೆಯು ವಿಸ್ತೃತ ಮತ್ತು ವ್ಯಾಪಕವಾದ ಮೂಲ ಸೌಕರ್ಯಗಳ ಜೊತೆಗೆ ಸಮರ್ಪಿತವಾದ ಹಾಗೂ ಅತ್ಯುತ್ಕೃಷ್ಟವಾದ ಮಾನವಸಂಪನ್ಮೂಲವನ್ನು ಹೊಂದಿದೆ.

ಜೆಎಸ್‌ಎಸ್ ಮಹಾವಿದ್ಯಾಪೀಠವು ಈ ಎಲ್ಲಾ ಸಂಸ್ಥೆಗಳನ್ನು ಹಿಂದುಳಿದ ಬುಡಕಟ್ಟು ಪ್ರದೇಶಗಳಿಂದ ಹಿಡಿದು ದೇಶದ ಪ್ರಮುಖ ಆಯಾಕಟ್ಟಿನ ಪ್ರದೇಶಗಳಾದ ನೊಯಿಡಾ, ನವದೆಹಲಿ, ಊಟಿ ಮತ್ತು ಕೊಯಮ್ಮತ್ತೂರುಗಳಂತಹ ಪ್ರಮುಖ ಮಹಾನಗರಗಳಲ್ಲಿಯೂ ಸಂಸ್ಥಾಪಿಸಿ ಅಭಿವೃದ್ಧಿಗೊಳಿಸಿದೆ. ಈ ಸಂಸ್ಥೆಯು ಸಮಾಜದ ವಿವಿಧ ಸ್ಥರಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದೆೆ. ಇಷ್ಟೇ ಅಲ್ಲದೆ, ಜೆಎಸ್‌ಎಸ್ ಮಹಾವಿದ್ಯಾಪೀಠವು ಅಮೆರಿಕಾ, ಮಾರಿಷಸ್, ದುಬೈಗಳಲ್ಲಿಯೂ ತನ್ನ ಅಸ್ಥಿತ್ವವನ್ನು ವಿಸ್ತರಿಸಿದೆ.

ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಪ್ರಭಾವ ಈ ನಾಡಿನ ಜನರ ಮೇಲೆ ಎಷ್ಟರಮಟ್ಟಿಗೆ ಇದೆ ಎಂದರೆ, ಅವರು ಈ ಜಗತ್ತನ್ನು ಸೌಹಾರ್ದಯುತ ಜೀವನಕ್ಕೆ ಯೋಗ್ಯವನ್ನಾಗಿಸಿದ ಅತ್ಯಂತ ಸ್ಪೂರ್ತಿದಾಯಕ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಶ್ರೀಗಳು ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವತ್ ಅನ್ನು ಹೊಂದಿದವರಾಗಿದ್ದರು. ಕಲೆ ಮತ್ತು ಸಾಹಿತ್ಯದ ಕೃಪಾಪೋಷಕರಾಗಿದ್ದರು. ಶ್ರೀಯುತರಿಗೆ ಶ್ರೀ ಜಯಚಾಮರಾಜ ಒಡೆಯರ್ ರವರು ೧೯೭೦ರಲ್ಲಿ “ರಾಜಗುರುತಿಲಕ” ಎಂಬ ಗೌರವ ಪ್ರದಾನ ಮಾಡಿದರು. ಮರಣೋತ್ತರವಾಗಿ, ೧೯೮೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.




ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರು


ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ಪ್ರಸಕ್ತ ಮಠಾಧೀಶರು ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧ್ಯಕ್ಷರು ಆದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ೨೪ನೇ ಮಠಾಧಿಪತಿಗಳಾಗಿ ೧೯೮೬ರಲ್ಲಿ ಅಧಿಕಾರ ವಹಿಸಿಕೊಂಡರು. ಶ್ರೀಗಳು ತಮ್ಮ ಆಧ್ಯಾತ್ಮಿಕ ಶಿಕ್ಷಣವನ್ನು ತಮ್ಮ ಪೂರ್ವ ಪೀಠಾಧೀಶರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.

ಪೂಜ್ಯ ಶ್ರೀಗಳವರು ಆರೋಗ್ಯ, ವಿಜ್ಞಾನಾಧಾರಿತ ಪರಿಗಣಿತ (ಡೀಮ್ಡ್) ವಿಶ್ವ ವಿದ್ಯಾನಿಲಯವಾದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್) ಮತ್ತು ಖಾಸಗಿ ತಾಂತ್ರಿಕ ವಿಶ್ವ ವಿದ್ಯಾನಿಲಯವಾದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿದ್ದಾರೆ.

ಪೂಜ್ಯಶ್ರೀಗಳವರ ವಿಶಾಲ ದೂರ ದೃಷ್ಟಿ ಮತ್ತು ಜಾಗತಿಕ ದೃಷ್ಟಿಕೋನದ ಫಲವಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಇಂದು ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರದ ಗಡಿಯನ್ನು ದಾಟಿ ತನ್ನ ಕಾರ್ಯಚಟುವಟಿಕೆಗಳನ್ನು ಅಭಿವೃದ್ಧಿ ಪಥದತ್ತ ವಿಸ್ತರಿಸಲು ಸಾಧ್ಯವಾಗಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಧ್ಯಾತ್ಮಿಕ ಮಾರ್ಗದರ್ಶನ, ಪ್ರೇರಣೆ ಮತ್ತು ನಾಯಕತ್ವದಿಂದ ಪ್ರೇರಿತವಾದ ಜೆಎಸ್‌ಎಸ್ ಮಹಾವಿದ್ಯಾಪೀಠವು ರಾಷ್ಟ್ರದ ಅತೀ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆಯಲ್ಲದೆ ಉದ್ಯೋಗಾವಕಾಶ ಸೃಷ್ಟಿಯಲ್ಲಿಯೂ ಸಹ ಮುಂಚೂಣಿಯಲ್ಲಿದೆ.

ಸಾಕ್ಷರತೆ, ಆರೋಗ್ಯ ಸೇವೆ, ಉದ್ಯೋಗಸೃಷ್ಟಿ ಮತ್ತು ಸಮಾಜಸೇವೆಗಳಂತಹ ಮಾನವಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಮಪೂಜ್ಯ ಶ್ರೀಗಳ ಅನನ್ಯವಾದ ಕೊಡುಗೆಗಳಿಗೆ ವಿಶ್ವದಾದ್ಯಂತ ಶ್ಲಾಘನೆ ಬರುತ್ತಿದೆ. ಅವರ ದೂರದೃಷ್ಟಿ ಮತ್ತು ಸ್ಪೂರ್ತಿದಾಯಕ ಮಾರ್ಗದರ್ಶನವೇ ೨೧ನೇ ಶತಮಾನದ ನಿರೀಕ್ಷೆಗಳು ಮತ್ತು ಅಗತ್ಯತೆಗಳನ್ನು ಸಮರ್ಥವಾಗಿ ನಿರ್ವಹಿಸಲು ಜೆಎಸ್‌ಎಸ್ ಸಂಸ್ಥೆಗಳನ್ನು ಸಿದ್ಧಗೊಳಿಸಿದೆ.

ಪರಮಪೂಜ್ಯ ಶ್ರೀಗಳ ಧಾರ್ಮಿಕ ನೇತೃತ್ವವು ಬಹು ಸಾಂಸ್ಕೃತಿಕ ಮತ್ತು ಸಹಿಷ್ಣುಸಮಾಜದ ಪ್ರಸ್ತುತ ಅಗತ್ಯಗಳನ್ನು ಪೂರೈಸುವ ಅನೇಕ ಪ್ರಗತಿಪರ ಉಪಕ್ರಮಗಳಿಗೆ ನಾಂದಿಯಾಗಿದೆ. ಮನುಕುಲಕ್ಕೆ ಅನುಕೂಲವಾಗುವಂತಹ ಕಾರ್ಯಚಟುವಟಿಕೆಗಳಿಗೆ ವೇದಿಕೆಯೊಂದನ್ನು ಒದಗಿಸುವ ಉದ್ದೇಶದಿಂದ ಶ್ರೀಗಳು ಮತ್ತು ವಿವಿಧ ಧರ್ಮಗಳ ಮುಖ್ಯಸ್ಥರನ್ನೊಳಗೊಂಡ, ಸಾಮೂಹಿಕ ನಾಯಕತ್ವದ ಅಖಿಲ ಭಾರತ ಮಟ್ಟದ “ಭಾರತೀಯ ಸಾಂಸ್ಕೃತಿಕ ಪರಿಷತ್” ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅಮೆರಿಕಾದ ಮೆರಿಲ್ಯಾಂಡ್‌ನಲ್ಲಿ ಜೆಎಸ್‌ಎಸ್ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿನ ಮೌಲ್ಯಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಉತ್ತೇಜನ ನೀಡುತ್ತಿದ್ದಾರೆ. ಧರ್ಮಗ್ರಂಥಗಳು ಮತ್ತು ಆಧ್ಯಾತ್ಮಿಕ ಗ್ರಂಥಗಳಲ್ಲಿ ಲಭ್ಯವಿರುವ ಜ್ಞಾನವನ್ನು ಪ್ರಚುರಪಡಿಸಲು ಪ್ರಕಾಶನ ಸಂಸ್ಥೆ ಮತ್ತು ಗುರುಕುಲಗಳನ್ನು ಮುಂದುವರಿಸಿಕೊಂಡು ಬರುವ ಮೂಲಕ ನಿರಂತರವಾಗಿ ಸಕ್ರಿಯರಾಗಿದ್ದಾರೆ.

ಇದರ ಜೊತೆಗೆ ಸಾಂಪ್ರದಾಯಿಕ ಶಾಲೆಯನ್ನು ಮಧ್ಯಂತರದಲ್ಲಿ ತೊರೆದ ವಿದ್ಯಾರ್ಥಿಗಳ ಸಲುವಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲು ಜೆಎಸ್‌ಎಸ್ ಮಹಾವಿದ್ಯಾಪೀಠದ ಅಂಗಸಂಸ್ಥೆಯಾಗಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಮುಕ್ತ ವಿದ್ಯಾಲಯ ಸಂಸ್ಥೆಯನ್ನು 1999-2000 ರಲ್ಲಿ ಸ್ಥಾಪಿಸಿದ್ದು ಅದರ ಅಧ್ಯಕ್ಷರಾಗಿರುತ್ತಾರೆ.




ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್


ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಹಿಂದೆ ನ್ಯಾಷನಲ್ ಓಪನ್ ಸ್ಕೂಲ್ (NOS) ಎಂದು ಕರೆಯಲಾಗುತ್ತಿತ್ತು. ಇದನ್ನು ನವೆಂಬರ್ 1989ರಲ್ಲಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 1986ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರವಾಗಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಮುಕ್ತ ಶಾಲೆಯನ್ನು ಮೂಲತಃ 1979 ರಿಂದ ಸಿಬಿಎಸ್‌ಇ ಯೋಜನೆಯಾಗಿ ಪ್ರಯೋಗಿಸಲಾಯಿತು. ನಂತರ ಅಕ್ಟೋಬರ್ 1990ರಲ್ಲಿ ಭಾರತ ಸರ್ಕಾರದ ನಿರ್ಣಯದ ಮೂಲಕ ಎನ್‌ಐಓಎಸ್ ನೊಂದಿಗೆ ವಿಲೀನಗೊಳಿಸಲಾಯಿತು.

ಎನ್‌ಐಓಎಸ್ ರಾಷ್ಟ್ರದ ಒಂದು ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಮಾನವ ಅಭಿವೃದ್ಧಿ ಹಾಗೂ ಶಿಕ್ಷಣ ಮಂತ್ರಾಲಯ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಎನ್‌ಐಓಎಸ್ ನಿಂದ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಮಟ್ಟದಲ್ಲಿ ಸಾಮಾನ್ಯ ಮತ್ತು ಶೈಕ್ಷಣಿಕ ಕೋರ್ಸ್‍ಗಳ ಜೊತೆಗೆ ಹಲವಾರು ವೃತ್ತಿಪರ, ಜೀವನ ಕೌಶಲ ಮತ್ತು ಸಮುದಾಯ ಆಧಾರಿತ ಕೋರ್ಸ್‍ಗಳನ್ನು ಸದರಿ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಎನ್‌ಐಓಎಸ್ ಮುಕ್ತ ಶಿಕ್ಷಣ ಕಾರ್ಯಕ್ರಮಗಳ ಮೂಲಕ (OBE) ಪ್ರಾಥಮಿಕ ಹಂತದ ಕಾರ್ಯಕ್ರಮಗಳನ್ನು ಸಹ ನೀಡಲಾಗುತ್ತಿದೆ. ಗೆಜೆಟ್ ಅಧಿಸೂಚನೆಯ ಮೂಲಕ ಭಾರತ ಸರ್ಕಾರವು ತನ್ನಲ್ಲಿ ನೋಂದಾಯಿಸಲಾದ ಕಲಿಯುವವರನ್ನು ಶೈಕ್ಷಣಿಕ,ತಾಂತ್ರಿಕ / ವೃತ್ತಿಪರ ಕೋರ್ಸ್‍ಗಳನ್ನು ಪದವಿಪೂರ್ವ ಹಂತದವರೆಗೆ (ಸೆಕೆಂಡರಿ, ಸೀನಿಯರ್ ಸೆಕೆಂಡರಿ) ಪರೀಕ್ಷಿಸಲು ಮತ್ತು ಪ್ರಮಾಣೀಕರಿಸುವ ಅಧಿಕಾರವನ್ನು ಹೊಂದಿದೆ. ಎನ್‌ಐಓಎಸ್ ವಿಶ್ವದಲ್ಲೇ ಅತಿ ದೊಡ್ಡದಾದ ವ್ಯಾಪಕಜಾಲವನ್ನು ಹೊಂದಿರುವ ಸ್ವಾಯತ್ತ ಶೈಕ್ಷಣಿಕ ಸಂಸ್ಥೆಯಾಗಿದೆ.

ಭಾರತವು ಜಾಗತೀಕ ಶಿಕ್ಷಣದ ಕೇಂದ್ರವಾಗಬೇಕು. ನಿಗಧಿತ ಅವಧಿಯಲ್ಲಿ ಶಿಕ್ಷಣ ಸಾಕ್ಷರತೆ ಪ್ರಮಾಣವನ್ನು ಸಾಧಿಸಲು ಹಾಗೂ ಅತ್ಯುನ್ನತ ಸಾಕ್ಷರತೆ ಧರವನ್ನು ರಾಜ್ಯಗಳಲ್ಲಿ ಹೆಚ್ಚಿಸಲು, ರಾಜ್ಯ ಮುಕ್ತ ವಿದ್ಯಾಲಯವನ್ನು (ಎಸ್‌ಓಎಸ್) ಸರ್ವರಿಗೂ ಶಿಕ್ಷಣದ ಚೌಕಟ್ಟಿಗೆ ತರಲು (NOS) ಪ್ರಯತ್ನಿಸಲಾಗುತ್ತಿದೆ.

ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ರಾಜ್ಯ ಮುಕ್ತ ವಿದ್ಯಾಲಯವನ್ನು ಆಯಾ ರಾಜ್ಯಗಳ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ಕರ್ನಾಟಕ ಮುಕ್ತ ವಿದ್ಯಾಲಯವನ್ನು ಮುನ್ನಡೆಸಲು ಎನ್‌ಐಓಎಸ್ ಮಾನ್ಯತೆಯೊಂದಿಗೆ ಕರ್ನಾಟಕ ಸರ್ಕಾರವು ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ 1999-2000ರಲ್ಲಿ ಮಾನ್ಯತೆ ನೀಡಿದೆ.

ಗುರಿ ಮತ್ತು ಉದ್ದೇಶಗಳು

ಗುರಿ

“ಗುಣಮಟ್ಟದ ಶಾಲಾ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಾರ್ವತ್ರಿಕ ಮತ್ತು ಹೊಂದಿಕೊಳ್ಳುವ ಪ್ರವೇಶದೊಂದಿಗೆ ಅಂತರ್ಗತ ಕಲಿಕೆ”





ಉದ್ದೇಶಗಳು

• ಸರ್ಕಾರ/ಸಂಘಸಂಸ್ಥೆಗಳ ಕೋರಿಕೆ ಮೇರೆಗೆ ಸೆಕೆಂಡರಿ ವಿಭಾಗದಲ್ಲಿ ಮುಕ್ತ ಮತ್ತು ದೂರಶಿಕ್ಷಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಮತ್ತು ರಾಜ್ಯಗಳಿಗೆ ವೃತ್ತಿಪರ ಸಲಹೆಯನ್ನು ನೀಡುವುದು
• ಜೀವನೋಪಾಯಕ್ಕಾಗಿ ಮತ್ತು ಪದವಿಪೂರ್ವ ಹಂತದವರೆಗೆ ಜೀವನ ಪರ್ಯಂತ ಕಲಿಕೆಗಾಗಿ ಅಗತ್ಯ ಆಧಾರಿತ ಶೈಕ್ಷಣಿಕ ಮತ್ತು ವೃತ್ತಿಪರ ಶಿಕ್ಷಣ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು
• ಕಲಿಯುವವರಿಗೆ ಗುಣಮಟ್ಟದ ಮುಕ್ತ ಮತ್ತು ದೂರಶಿಕ್ಷಣ ಪಠ್ಯಕ್ರಮ ಮತ್ತು ಕೋರ್ಸ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪದವಿಪೂರ್ವ ಹಂತದವರೆಗೆ ಕಲಿಕೆಯನ್ನು ಸುಲಭಗೊಳಿಸಲು ಪರಿಣಾಮಕಾರಿ ಕಲಿಕೆಗೆ ಬೆಂಬಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಸ್ಥೆಗಳಿಗೆ ಮಾನ್ಯತೆ ನೀಡುವುದು
• ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಒತ್ತುನೀಡುವುದು.
• ನೆಟ್‌ವರ್ಕಿಂಗ್, ಸಾಮರ್ಥ್ಯ ವರ್ಧನೆ, ಸಂಪನ್ಮೂಲಗಳ ಹಂಚಿಕೆ ಮತ್ತು ಗುಣಮಟ್ಟದ ಭರವಸೆಯ ಮೂಲಕ ರಾಷ್ಟಿçÃಯ ಮತ್ತು ಜಾಗತಿಕ ಮಟ್ಟಕ್ಕೆ ಮುಕ್ತ ಶಿಕ್ಷಣವನ್ನು ಕೊಂಡೊಯ್ಯಲು ಉತ್ತೇಜಿಸುವುದು, ಇತ್ಯಾದಿ...




ಕರ್ನಾಟಕ ಮುಕ್ತ ವಿದ್ಯಾಲಯ

ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ, ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್‍ಐಓಎಸ್) ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಶಿಕ್ಷಣ ಮಂತ್ರಾಲಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಷ್ಟ್ರದಾದ್ಯಂತ ನಾನಾ ಕಾರಣಗಳಿಂದ ಮಧ್ಯಂತರದಲ್ಲಿ ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಸಮಾಜದ ಪ್ರಮುಖ ವಾಹಿನಿಗೆ ತರಲು ಹಾಗೂ ಕರ್ತವ್ಯನಿರತ ನೌಕರರು ಸ್ಥಗಿತಗೊಳಿಸಿದ್ದ ಶಿಕ್ಷಣವನ್ನು ಮುಕ್ತ ವಿದ್ಯಾಲಯ ಮೂಲಕ ಮುಂದುವರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಕರ್ನಾಟಕ ಮುಕ್ತ ವಿದ್ಯಾಲಯ (ಕೆಓಎಸ್) ಕೇಂದ್ರದ ರಾಷ್ಟ್ರೀಯ ಮುಕ್ತ ವಿದ್ಯಾಲಯ (NIOS) ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಶಾಶ್ವತ ಮಾನ್ಯತೆ ಪಡೆದ ಜೆಎಸ್‌ಎಸ್ ಮಹಾವಿದ್ಯಾಪೀಠದ ಅಂಗಸಂಸ್ಥೆಯಾಗಿದೆ. . ರಾಜ್ಯದಲ್ಲಿ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡಲು ರಾಜ್ಯದ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ 1999-2000ದ ಸಾಲಿನಲ್ಲಿ ಕರ್ನಾಟಕ ಮುಕ್ತ ವಿದ್ಯಾಲಯದ ಮೂಲಕ ಸೆಕೆಂಡರಿ 10ನೇ ತರಗತಿ, ಹಿರಿಯ ಸೆಕೆಂಡರಿ 12ನೇ ತರಗತಿ ಹಾಗೂ ಅಲ್ಪಾವಧಿ ವೃತ್ತಿ ಶಿಕ್ಷಣ ಕೋರ್ಸ್‍ಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರವು ಅನುಮತಿ ನೀಡಿದೆ. (ಸರ್ಕಾರದ ಆದೇಶ ಸಂಖ್ಯೆ: ಇಡಿ:52 ಎಸ್‌ಇಎಸ್ 98 ಬೆಂಗಳೂರು, ದಿ.22.12.2001). ಪ್ರಾರಂಭದಿಂದ ಇದುವರೆಗೆ ಮುಕ್ತ ವಿದ್ಯಾಲಯದಿಂದ ಪ್ರಸ್ತುತ ಸೆಕೆಂಡರಿ 10ನೇ/ಎಸ್‌ಎಸ್‌ಎಲ್‌ಸಿಗೆ ಪ್ರವೇಶ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕರ್ನಾಟಕ ಮುಕ್ತ ವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಹಿಂದಿನ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿ (KSEEB) ಇಂದಿನ ಕರ್ನಾಟಕ ಶಾಲಾಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಕರ್ನಾಟಕ ಮುಕ್ತ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಮೌಲ್ಯಮಾಪನ ಕಾರ್ಯನಿರ್ವಹಿಸಿ ಅಂಕಪಟ್ಟಿಗಳನ್ನು ನೀಡುವ ಇತ್ಯಾದಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

2006ರಲ್ಲಿ ಕರ್ನಾಟಕ ಸರ್ಕಾರವು “ಕರ್ನಾಟಕ ಮುಕ್ತ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿ ನೀಡುವ ಅಂಕಪಟ್ಟಿಯು ಸಾಂಪ್ರದಾಯಿಕ / ರೆಗ್ಯುಲರ್ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗೆ ತತ್ಸಮಾನ/ಸಮಾನ” ಎಂದು ಆದೇಶ ನೀಡಿದೆ. (ಆದೇಶ ಸಂಖ್ಯೆ: ಇಡಿ 73 ಎಸ್‌ಎಲ್‌ಬಿ 2006, ಬೆಂಗಳೂರು. ದಿನಾಂಕ. 06.09.2006.) ಸದರಿ ಆದೇಶದ ಪರಿಣಾಮ ಮುಕ್ತ ವಿದ್ಯಾಲಯದಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು “ಮುಂದಿನ ವ್ಯಾಸಂಗವನ್ನು ಪದವಿಪೂರ್ವ, ಐಟಿಐ, ಡಿಪ್ಲೋಮೋ ಇತ್ಯಾದಿ ಸಂಸ್ಥೆಗಳಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶವಿದೆ. (ಸರ್ಕಾರದ ಆದೇಶ ಸಂಖ್ಯೆ : ಪಪೂಶಿಇ/ಶೈಶಾ/ಕ.ಮು.ವಿ./2021-22 ದಿನಾಂಕ 07.04.2022) ಮುಕ್ತ ವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಸರ್ಕಾರ/ಖಾಸಗಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅರ್ಹತೆಯನ್ನು” ಪಡೆದಿರುತ್ತಾರೆ. (ಸರ್ಕಾರದ ಆದೇಶ ಸಂಖ್ಯೆ: ಇಪಿ 72 ಎಸ್‌ಎಲ್‌ಬಿ 2022 ಬೆಂಗಳೂರು, ದಿನಾಂಕ 30ನೇ ಜೂನ್ 2023.)

ಮುಕ್ತ ವಿದ್ಯಾಲಯದ ವಿದ್ಯಾರ್ಥಿಗಳು ಕಲಿಕಾ ವೇಳೆ, ಕಲಿಯುವ ಸ್ಥಳ, ವಿಷಯಗಳ ಆಯ್ಕೆ, ಪರೀಕ್ಷೆ ತೆಗೆದುಕೊಳ್ಳುವ ಸಮಯ ಇತ್ಯಾದಿ ವಿಷಯಗಳಲ್ಲಿ ಮುಕ್ತವಾದ ಸ್ವಾತಂತ್ರ್ಯ ಹೊಂದಿರುತ್ತಾರೆ. ಕರ್ನಾಟಕ ಮುಕ್ತ ವಿದ್ಯಾಲಯವು ಶಾಲಾ ಶಿಕ್ಷಣ ವಂಚಿತರಿಗೆ, ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಕೊಂಡೊಯ್ಯುವ ಮಹತ್ತರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬರುತ್ತಿದೆ. ಕಳೆದ ದಶಕಗಳಿಂದ ಇದುವರೆಗೆ 10ನೇ ತರಗತಿಗೆ 1,05,686 ವಿದ್ಯಾರ್ಥಿಗಳು ಮುಕ್ತ ವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದು, ಅವರಲ್ಲಿ 71,352 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸಂಸ್ಥೆಗೆ ಸರಾಸರಿ 67.51 ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾಗಿ ಮುಕ್ತ ಕಲಿಕಾ ವ್ಯವಸ್ಥೆಯ ಮೂಲಕ ಪದವಿಪೂರ್ವ (12ನೇ ತರಗತಿ) ಹಂತದವರೆಗೆ ಸಮಾಜದಲ್ಲಿ ಹೆಚ್ಚಿನ ಸಮಾನತೆ ಮತ್ತು ಕಲಿಕಾ ಸಮಾಜದ ವಿಕಾಸಕ್ಕೆ ಶಿಕ್ಷಣದ ಸಾರ್ವತ್ರೀಕರಣದ ಉದ್ದೇಶವನ್ನು ಕರ್ನಾಟಕ ಮುಕ್ತ ವಿದ್ಯಾಲಯವು ಹೊಂದಿದೆ. ಪ್ರಾದೇಶಿಕ ಭಾಷೆಯಲ್ಲಿ ಬೋಧನಾ ಮಾಧ್ಯಮವನ್ನು ಒಳಗೊಂಡಿರುವುದರಿಂದ ಮಧ್ಯಂತರದಲ್ಲಿ ಶಾಲೆ ಬಿಟ್ಟಿರುವ ಕಲಿಕಾರ್ಥಿಗಳು ಶಿಕ್ಷಣವನ್ನು ಕರ್ನಾಟಕ ಮುಕ್ತ ವಿದ್ಯಾಲಯ ಮೂಲಕ ಮುಂದುವರೆಸಲು ವರದಾನವಾಗಿದೆ.

ಧ್ಯೇಯ ಮತ್ತು ಉದ್ದೇಶಗಳು

ಧ್ಯೇಯ (Vision and Mission)

• ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದು, “ಗುಣಮಟ್ಟದ ಶಾಲಾ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಾರ್ವತ್ರಿಕ ಮತ್ತು ಹೊಂದಿಕೊಳ್ಳುವ ಪ್ರವೇಶದೊಂದಿಗೆ ಸುಸ್ಥಿರ ಅಂತರ್ಗತ ಕಲಿಕೆಗೆ ಶಿಕ್ಷಣಾರ್ಥಿಗಳಿಗೆ” ಒತ್ತು ನೀಡಿಕೆ.

• ಕರ್ನಾಟಕ ಮುಕ್ತ ವಿದ್ಯಾಲಯ ರಾಷ್ಟ್ರೀಯ ಮನ್ನಣೆ ಮತ್ತು ಉಪಸ್ಥಿತಿಯೊಂದಿಗೆ, ಸುಸ್ಥಿರ ಕಲಿಕೆಗಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವನ್ನು ಒದಗಿಸುತ್ತದೆ. ಕೇಂದ್ರೀಕೃತ ಗುಣಮಟ್ಟದ ಶಾಲಾ ಶಿಕ್ಷಣ, ಕೌಶಲ್ಯದ ಉನ್ನತೀಕರಣ ಮತ್ತು ತರಬೇತಿಯನ್ನು ಮುಕ್ತ ವಿದ್ಯಾಲಯದ ಕಲಿಕಾ ಕೇಂದ್ರಗಳ ಮೂಲಕ ಒದಗಿಸುವುದು.





ಉದ್ದೇಶಗಳು (Objectives)

• ರಾಜ್ಯ ಮುಕ್ತ ವಿದ್ಯಾಲಯದ ಧ್ಯೇಯೋದ್ದೇಶವು ಮುಕ್ತ ಕಲಿಕಾವ್ಯವಸ್ಥೆ ಮೂಲಕ ಸೆಕಂಡರಿ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿತ ಮುಂದುವರಿದ ಮತ್ತು ಅಭಿವೃದ್ಧಿಶೀಲ ಶಿಕ್ಷಣ ಒದಗಿಸುವುದಾಗಿದೆ.
• ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‍ನ ಸಹಯೋಗದೊಂದಿಗೆ ಕಲಿಕಾರ್ಥಿಗಳಿಗೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಅತ್ಯುತ್ತಮ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕತೆಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಾಗಿದೆ.
• ಶಿಕ್ಷಣ ತಲುಪದ ಸಮಾಜದಲ್ಲಿನ ನಾಗರೀಕರಿಗೆ ಸೆಕಂಡರಿ ಮತ್ತು ಹೈಯರ್ ಸೆಕೆಂಡರಿ ಶಿಕ್ಷಣ ಮೂಲಕ ಉತ್ತೇಜಿಸುವುದು
• ಮಧ್ಯಂತರದಲ್ಲಿ ಶಾಲೆಬಿಟ್ಟ ಮಕ್ಕಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಉತ್ತೇಜಿಸುವುದು
• ಯೋಜಿತ ಕಾರ್ಯಕ್ರಮಗಳ ಮೂಲಕ ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡುವುದುಕಲಿಕಾರ್ಥಿಗಳಿಗೆ ಮುದ್ರಿತ ಪಠ್ಯಪುಸ್ತಕ/ಎಲೆಕ್ಟ್ರಾನಿಕ್ ಮಾಧ್ಯಮವಾದ ಆಡಿಯೋ, ವೀಡಿಯೋ ಮೂಲಕ ಶೈಕ್ಷಣಿಕ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು
• ಅಗತ್ಯವಿರುವ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಗುಣಮಟ್ಟದ ಭರವಸೆಯ ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಮತ್ತು ಮೌಲ್ಯಮಾಪನ ಕಾರ್ಯವನ್ನು ನಿರ್ವಹಿಸುವುದು
• ಕೌಶಲ್ಯಕ್ಕೆ ಪೂರಕವಾದ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವುದು
ಒಟ್ಟಾರೆ ಕರ್ನಾಟಕ ಮುಕ್ತ ವಿದ್ಯಾಲಯವು ಹೆಣ್ಣುಮಕ್ಕಳು, ಮಹಿಳೆಯರು, ಯುವಕರು, ಉದ್ಯೋಗಸ್ಥ ಪುರುಷ/ಮಹಿಳೆಯರು, ವಿಶೇಷ ಸಾಮರ್ಥ್ಯ ಹೊಂದಿರುವವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಕಲಿಕಾರ್ಥಿಗಳಿಗೆ ವಿಶೇಷ ಕಾಳಜಿಯೊಂದಿಗೆ ಶಿಕ್ಷಣವನ್ನು ಒದಗಿಸುವುದು, ನಾನಾ ಕಾರಣಗಳಿಂದ ಮಧ್ಯಂತರದಲ್ಲಿ ಶಿಕ್ಷಣವನ್ನು ನಿಲ್ಲಿಸಿದವರಿಗೆ, ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದವರಿಗೆ ಕರ್ನಾಟಕ ಮುಕ್ತ ವಿದ್ಯಾಲಯವು ಒಂದು ಪ್ರಮುಖ ಅನೌಪಚಾರಿಕ ಶಿಕ್ಷಣ ಸಂಸ್ಥೆಯಾಗಿ ಕಾರ್ಯೋನ್ಮುಖವಾಗಿದೆ.


ಕಾರ್ಯಚಟುವಟಿಕೆಗಳು (Objectives)

• ಬಹುತೇಕ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯದಾದ್ಯಂತ ಸ್ಥಾಪಿಸಿರುವ ಮುಕ್ತ ವಿದ್ಯಾಲಯದ ಕಲಿಕಾ ಕೇಂದ್ರಗಳಲ್ಲಿ ಹಾಗೂ ವಿದ್ಯುನ್ಮಾನದ ಅಂತರ್ಜಾಲದ ಮೂಲಕ ಪ್ರವೇಶಪ್ರಕ್ರಿಯೆ ಹಾಗೂ ಕಾರ್ಯನಿರ್ವಹಣೆ
• ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯ ಮೂಲಕ 10ನೇ/12ನೇ ತರಗತಿಗಳಿಗೆ ಸಂಬಂಧಿತ ನಿರಂತರ ಮತ್ತು ಸಮಗ್ರ ಶಿಕ್ಷಣ ನೀಡಿಕೆ
• ಅಲ್ಪಾವಧಿ ವೃತ್ತಿಶಿಕ್ಷಣ ಕೋರ್ಸ್‍ಗಳ ಮೂಲಕ ಕೌಶಲ್ಯ ಅಭಿವೃದ್ಧಿ
• ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಕೊಡುಗೆ
• ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಆದ್ಯತೆಯ ಗುಂಪುಗಳಿಗೆ ಶೈಕ್ಷಣಿಕ ಅಗತ್ಯಗಳ ಪೂರೈಕೆ
• ನಿಗದಿತ ಅವಧಿಯಲ್ಲಿ ಶೇ.100ರಷ್ಟು ಸಾಕ್ಷರತೆ ಪ್ರಮಾಣದ ಗುರಿ ಈಡೇರಿಕೆಗೆ ಸರ್ಕಾರಗಳೊಡನೆ ಸಹಕಾರ
• ಸಮಾಜದ ಸರ್ವನಾಗರೀಕರನ್ನು ಶಿಕ್ಷಣದ ಚೌಕಟ್ಟಿನೊಳಗೆ ತರುವುದು ಹಾಗೂ ಕಲಿಕಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣವನ್ನು ಒದಗಿಸುವುದು

ನಮ್ಮ ವೈಶಿಷ್ಟ್ಯಗಳು

  • ಕಲಿಕಾ ಸ್ವಾತಂತ್ರ್ಯ
  • ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ
  • ಗಳಿಕೆಯ ಜೊತೆ ಕಲಿಕೆ


  • ವಯಸ್ಸಿನ ಮೇಲ್ಮಿತಿ ಇಲ್ಲ
  • ಮನೆಯಲ್ಲೇ ಅಭ್ಯಾಸ
  • ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಮಾನ


  • ಉನ್ನತ ಶಿಕ್ಷಣಕ್ಕೆ ಸೇರುವ ಅವಕಾಶ
  • ಗೃಹಿಣಿಯರು ಮತ್ತು ಮಹಿಳೆಯರಿಗೆ ಕಲಿಕೆಯ ಅವಕಾಶ